ನಾರದ ಸ್ಮೃತಿ
ಪ್ರಾಚೀನ ಭಾರತದ ಪೌರಾಣಿಕ ಪರಂಪರೆಯಲ್ಲಿರುವ ಮಹರ್ಷಿಗಳ ಪೈಕಿ ನಾರದನೂ ಒಬ್ಬ. ನಾರದ ಸ್ಮøತಿ ಎಂಬ ಗ್ರಂಥವನ್ನು ರಚಿಸಿರುವ ಒಂದು ವಿಶಿಷ್ಟ ಧರ್ಮ ಶಾಸ್ತ್ರ ಪಂಥದೊಂದಿಗೆ ಈತನ ಹೆಸರು ಮಿಳಿತವಾಗಿದೆ. ಈ ಸ್ಮøತಿಗೆ ಎರಡು ಪಾಠಗಳಿವೆ. ಧರ್ಮಶಾಸ್ತ್ರಗಳಲ್ಲಿ ಸಾಮಾನ್ಯವಾಗಿ ನಿರೂಪಿಸಲಾಗುವ ಮೂರು ವಿಷಯಗಳ ಪೈಕಿ ಈ ಸ್ಮøತಿ ವ್ಯವಹಾರವನ್ನು ಮಾತ್ರ ಎತ್ತಿಕೊಳ್ಳುತ್ತದೆ. ಆಚಾರ ಮತ್ತು ಪ್ರಾಯಶ್ಚಿತ್ತ ಎಂಬ ಮಿಕ್ಕೆರಡು ವಿಷಯಗಳು ಈಗ ಉಪಲಬ್ಧವಿಲ್ಲ. ಆದರೆ ಅವುಗಳಿಂದ ಉಧೈತ ಭಾಗಗಳು ನಾರದನ ಹೆಸರಿನಲ್ಲಿ ಹಲವಾರು ಗ್ರಂಥಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತದೆ. ರಾಜನೀತಿ ವಿಷಯಕವಾದ ಮತ್ತೊಂದು ಗ್ರಂಥವನ್ನು ನಾರದ ಪ್ರಣೀತವೆಂದು ಹೇಳಲಾಗಿದೆ. ಈ ಸ್ಮøತಿಯ ಮೊದಲ ಮೂರು ಅಧ್ಯಾಯಗಳಲ್ಲಿ ನ್ಯಾಯ ವಿಧಾನಗಳ ಕುರಿತು ವಿವರಣೆಗಳಿವೆ. ಈ ವಿಷಯದಲ್ಲಿ ಇದು ಹಿಂದಿನ ಗ್ರಂಥಗಳಿಗಿಂತ ಹೆಚ್ಚು ಸಮಗ್ರವಾಗಿದೆ. ಬಳಿಕ ನ್ಯಾಯದ ವಿವಿಧ ಶಿರೋನಾಮೆಗಳ ಮೇಲೆ ವ್ಯವಸ್ಥಿತವಾದ ಚರ್ಚೆ ಬರುತ್ತದೆ. ಕೊನೆಯಲ್ಲಿ ಬರುವ ಒಂದು ಪರಿಶಿಷ್ಟ ಕಳವಿನ ಪರಿಶೀಲನೆಗೆ ಮೀಸಲಾಗಿದೆ. ಸಾಮಾನ್ಯವಾಗಿ ಈ ಸ್ಮøತಿ ಸೋಪಜ್ಞವಲ್ಲ ; ಮನುಸ್ಮøತಿಯಿಂದ ಅನೇಕ ಅಂಶಗಳನ್ನು ಇದು ಎತ್ತಿಕೊಂಡಿದೆ.  ಆದರೆ ಇದು ಮನುಸ್ಮøತಿಗಿಂತ ಚೆನ್ನಾಗಿ ಅಲ್ಲಿನ ವಿಷಯಗಳನ್ನು ಖಂಡೋಪಖಂಡಗಳಾಗಿ ವಿಂಗಡಿಸಿಕೊಂಡು ಒಂದು ವ್ಯವಸ್ಥಿತ ರೂಪದಲ್ಲಿ ವಿವರಿಸುತ್ತದೆ.  ನ್ಯಾಯಶಾಸ್ತ್ರದ ವಿಷಯಗಳಿಗೆ ಹೊಸ ಹೆಸರುಗಳನ್ನು ಕೊಟ್ಟು ಅವನ್ನು ಒಟ್ಟುಗೂಡಿಸುವುದರಲ್ಲಿ ವಿಷಯ ಪರೀಕ್ಷೆಯ ಚರ್ಚೆಯಲ್ಲಿ ನಿಯೋಗ ಮತ್ತು ದ್ಯೂತಗಳಿಗೆ ಒಪ್ಪಿಗೆ ಕೊಡುವುದರಲ್ಲಿ ಇದು ಮನುಸ್ಮøತಿಗಿಂತ ಭಿನ್ನವಾಗಿದೆ.

	ನಾರದ ಸ್ಮøತಿ ಗುಪ್ತರ ಕಾಲದ ಪೂರ್ವಭಾಗದಲ್ಲಿ ರಚಿತವಾದ ಗ್ರಂಥ. ಇದು ಯಾಜ್ಞವಲ್ಕ್ಯ ಸ್ಮøತಿಗಿಂತಲೂ ಹೆಚ್ಚಾಗಿ ಪೂರ್ವಚಾರಪ್ರಿಯವಾಗಿದೆ. (ಉದಾಹರಣೆಗೆ ವಿಧವೆಯ ಹಕ್ಕು ಬಾಧ್ಯತೆಗಳ ವಿಷಯದಲ್ಲಿ ಇವೆರಡು ಸ್ಮøತಿಗಳನ್ನೂ ಹೋಲಿಸಿನೋಡಿ) ಆದುದರಿಂದ ಇದು ಯಾಜ್ಞವಲ್ಕ್ಯ ಸ್ಮøತಿಗಿಂತ ಸ್ವಲ್ಪ ಹಳೆಯದೆಂದು ಊಹಿಸಲಾಗಿದೆ.			
	 (ಆರ್.ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ